Thursday, April 7, 2022

ಇದರ ಗುಟ್ಟು

 ಎಲ್ಲಿಯೋ ಇದೆಯಂತೆ ಗುರಿ

ಅರಿಯದು ತಲುಪುವ ಪರಿ

ಕೊನೆಯ ಮುಟ್ಟುವ ತವಕ

ಮರೆಸಿದೆ ಈ ದಿನದ ಬದುಕ


ನೋಡಿದಷ್ಟು ದೂರ

ಮುಗಿಯದು ಕಡಲ ತೀರ

ನಿಲುಕದ ನಕ್ಷತ್ರವ ಹುಡುಕಿ

ಜಾರುತಿದೆ ಪ್ರತಿಕ್ಷಣವು ದುಡುಕಿ


ಎಲ್ಲರಿಗೂ 'ಇದರ' ಹುಚ್ಚು

'ಇದು' ಏನೆಂದು ಅರಿಯದವರೇ ಹೆಚ್ಚು

ವಿಷಯ'ವಿದು' ಸರಳ

'ಇದ' ಬದುಕಿದವರು ವಿರಳ!!

Tuesday, May 29, 2018

ಬದುಕು

ಬಿಳಿಯ ಹಾಳೆಯ ಮೇಲೆ
ಬಣ್ಣವಿಲ್ಲದ ಶಾಹಿಯನದ್ದಿ
ಬರೆದು ಕಳಿಸಿದ ಬ್ರಹ್ಮ
ಬದುಕಿನ ಮರ್ಮ

ಹಾಳೆಯನು ಹಿಡಿದು
ನಾಳೆಯನು ಹುಡುಕುತಲಿ
ಕಾಲವನು ಕಳೆದಿಹೆವು
ಮರೆತು ಇಂದಿನ ಧರ್ಮ
ಇಂದಿನೊಳು ನಾಳೆಯಿದೆ
ಮನದೊಳಗೆ ದಾರಿಯಿದೆ
ಫಲದ ಕನಸನು ತೊರೆದು
ಅನುದಿನವು ಸಾಗಿರಲಿ ನಮ್ಮಯಾ ಕರ್ಮ

Monday, March 26, 2018

ಅಗೆದು ಬಗೆದರೂ ಸಿಗದು !

ಹತ್ತಾರು ವರುಷಗಳ ಕಳೆದು
ಬಹು ಎತ್ತರಕೆ ಬೆಳೆದು
ಹಣದ ಮಳೆ ಸುರಿದು
ನೋಡಿದನು ಕಣ್ತೆರೆದು
ಕಾಲವದು ಮುಗಿದು
ಕತ್ತಲೆಯು ಕವಿದು
ಸುತ್ತಮುತ್ತಲು ಬರಿದು
ಬರಲಾಗಲಿಲ್ಲ ಭುವಿಯ ಬಗೆದು!

Friday, January 12, 2018

ಕಣ್ಣ್ಮುಚ್ಚಿ ಬದುಕು

ಚಿಂತಿಸಿತು ಚಿತ್ತ

ಸಾಗಿದಷ್ಟು ದೂರ, ಹೊರದಷ್ಟು ಭಾರ
ಮನವೆಂಬ ಮರ್ಕಟವು ಮಾಡುತ್ತಿದೆ ಸಮರ
ತಿರುವುಗಳ ಸರಮಾಲೆ, ದಿಗಿಲುಗಳ ಜ್ವಾಲೆ
ನಗುವ ಮುಖವದು ಮೇಲೆ, ಒಳಗೆ ಬರಿ ಸೋಲೆ

ಸಂತೈಸಿತು ಆತ್ಮ

ಸೋಲು ಗೆಲುವುಗಳ ಮೀರಿದವ ನಾನು
ಆತ್ಮಾವಲೋಕನದ ಅರ್ಥ ತಿಳಿ ನೀನು
ಕಾಲಚಕ್ರವ ಗೆಲುವ ಕಷ್ಟಗಳೇ ಇಲ್ಲ
ಕಣ್ಣ್ಮುಚ್ಚಿ ನಡೆದುಬಿಡು ನಾನಿರುವೆನಲ್ಲ

Wednesday, January 20, 2016

ಅಂತರಂಗದ ಪಿಸುಮಾತು ...!

ಕಣ್ಣು ಕಾಣದವನಿಗೆ ಕಾಣದ ಸೂರ್ಯ,
ಕಿವಿಯೇ ಕೇಳದವನಿಗೆ ಕೇಳದ ಕೋಗಿಲೆಯ ಸದ್ದು,
ಮಾತನಾಡದವನ ಮನದಾಳದ ಮಾತನರಿಯಲಾಗದ ನಾವು,
ಇವುಗಳಲ್ಲಿ ಕೊರತೆ ಇರುವುದು ನಮ್ಮಲ್ಲೋ ಅವರಲ್ಲೋ .. 

ಒಳದನಿಗೆ ಓಗೊಡದ ಕೊರತೆ,
ತರಂಗಗಳ ಅಂತರಂಗವ ತಲುಪುವ ವಿಫಲತೆ,
ಅಗೋಚರವನು ಆಚರಿಸದ ಅಂಧಕಾರ,
ಅನುಭವಿಸಲು ಬೇಕಿರುವುದು ಅರಿವೇ ಹೊರತು ಪಂಚೆಂದ್ರಿಯವಲ್ಲ ..! 

Wednesday, November 26, 2014

ಪರಿವರ್ತನೆ ಜಗದ ನಿಯಮ

"ಪರಿವರ್ತನೆ ಜಗದ ನಿಯಮ" ಎಂದು ಗುರುಗಳು ಆಶ್ರಮದಲ್ಲಿ ಪ್ರವಚನವನ್ನು ಮಾಡುವಷ್ಟರಲ್ಲಿ, ಪಶ್ಚಿಮ ಘಟ್ಟದ ಮಧ್ಯೆ, ಸಹಸ್ರಾರು ವೃಕ್ಷಗಳ ನಡುವೆ, ಅದೆಂದೋ ಭೂಮಿಯನ್ನು ಸೇರಿದ ಅರಳಿಯ ಬೀಜವೊಂದು, ಆಗತಾನೆ ಮೊಳಕೆ ಬಿರಿದು ಹೊರಬಂತು. 

ಮತ್ತಾವುದೋ ಹಿರಿಯ ಮರದ ತುದಿಯಲ್ಲಿದ್ದ ಒಣಗಿದ ಎಲೆಯೊಂದು, ತೇಲಿ, ತಿರುಗಿ, ಗಿರಕಿ ಹೊಡೆದು, ಭುವಿಯನ್ನು ಸೇರಿತು

ಆಶ್ರಮದ ಎದುರಿಗಿದ್ದ ಟೀ ಅಂಗಡಿಯಲ್ಲಿ ಬೆಳಗಿನ ಬಿಸಿ ಚಹಾ ಹೀರುತಿದ್ದ ತಿಮ್ಮ, ಇದಾವುದರ ಅರಿವಿಲ್ಲದೆ, ತನ್ನ ಗುಜುರಿಯ ಸೈಕಲ್ಲನ್ನೇರಿ, ಮುಂದಿನ ಕಸದ ತೊಟ್ಟಿಯಲ್ಲಿ ತನ್ನ ಬದುಕನ್ನರಸಿ ಹೊರಟ !!      

Thursday, May 15, 2014

ಬದುಕಿನ ಬಣ್ಣನೆ


ಬದುಕು ಸವೆಯುವ ಮುನ್ನ 
ಸವಿದರೆಷ್ಟು ಚೆನ್ನ

ಚಿಗುರಿದೆನು ಹಿಂದೊಮ್ಮೆ 
ಮುದುರುವೆನು ಮುಂದೊಮ್ಮೆ 

ಚಿಗುರುವಾಗ ತವಕ 
ಮುದುರುವಾಗ ಮರುಕ 

ತವಕ ಮರುಕಗಳ ಮೀರಿ 
ಬೆಳೆಯುತಿಹೆ ನೀರು ಬೆಳಕನು ಹೀರಿ 

ಸೇರುವ ಜಾಗವನು ಚಿಂತಿಸದಿರು ನೀನು 
ಸಾಗುತಿಹ ದಾರಿಯಲಿ ಸಂತಸವ ಕಾಣು 

ನಿನ್ನೆ ಏನೆಂಬುದು ಕನಸುಗಳ ಕಂತೆ 
ನಾಳೆ ಏನೋ ತಿಳಿಯದು, ಮಾಡದಿರು ಚಿಂತೆ 

ಪ್ರತಿ ನಿಮಿಷ ಕಾಣುವುದು ಥರ ಥರದ ಬಣ್ಣ 
ತೆರೆದು ನೋಡು ನಿನ್ನ ಆಂತರ್ಯದ ಕಣ್ಣ 

ಬದುಕು ಸವೆಯುವ ಮುನ್ನ 
ಸವಿದರೆಷ್ಟು ಚೆನ್ನ!!

Thursday, March 22, 2012

ಹುಡುಗನ ಹುಡುಕಾಟ

ಮುಗಿಲಿನಷ್ಟು ಪ್ರೀತಿ ಮನದಲಿ,
ಯಾರಿಗಾಗಿ ಧಾರೆ ಎರೆಯಲಿ,
ಯಾರು ನನ್ನವಳು ಈ ಧರೆಯಲಿ.

Thursday, October 21, 2010

ಚಿಟ್ಟೆ ಹೋಯಿತು ಹಾರಿ, ಕನಸ ಗಾಳಿಗೆ ತೂರಿ

ಹ್ರುದಯಕಿಳಿದಳು
ಮಳೆಯ ಸುರಿದಳು
ಒಲವ ಬೆಳೆದಳು

ಚಿಗುರ ಕಿತ್ತಳು
ದೂರ ಸರಿದಳು
ಎಲ್ಲ ಮರೆತಳು

ಮನವ ಮುರಿದಳು
ನೆನಪಲುಳಿದಳು

ಮನಸು ಗರಿ ಬಿಚ್ಚಿದಾಗ

ಚೆಲುವೆ, ನನ್ನ ಆಸೆಗಳಿಗೆ ಮಿತಿಯಿಲ್ಲ,
ಆದರೂ ಅವುಗಳು ಅತಿಯೇನಲ್ಲ,

ಸುಳಿಮಿ೦ಚ ಆ ಕಣ್ಣ ಅನುದಿನವು ನೋಡುತಲಿ,
ಅರಗಿಣಿಯ ಆ ಮಾತ ಅನುದಿನವು ಕೇಳುತಲಿ,
ನಿನ್ನಯಾ ನಗುವಿನಲಿ ಕರಗುವಾಸೆ.

ಅತ್ತಾಗ ಕಣ್ಣೊರೆಸಿ, ಜೊತೆಗಿದ್ದು ಸ೦ತೈಸಿ,
ಬೆಳದಿ೦ಗಳ೦ಗಳದಿ ಕೈ ತುತ್ತ ತಿನಿಸಿ,
ನಿನ್ನಯಾ ತೊಳಿನಲಿ ಬೆರೆಯುವಾಸೆ.

ನಿನ್ನ ಮನದಾಳದಲಿ, ನನ್ನ ಮನ ಬಿಚ್ಚಿಟ್ಟು,
ನಿನ್ನ ಬಾಳಿನಲಿ ನನ್ನ ಹೆಜ್ಜೆಯನಿಟ್ಟು,
ನಿನ್ನ ಬೆಳಕಲಿ ಬದುಕ ಸವಿಯುವಾಸೆ.

ನನ್ನ ಹ್ರುದಯದ ವೀಣೆ ಮೀಟಿ ಮಿಡಿಯುವ ತ೦ತಿ,
ನೀನಾಗಬೇಕು ಎ೦ಬುದೊ೦ದೇ ಆಸೆ.

ಚೆಲುವೆ, ನನ್ನ ಆಸೆಗಳಿಗೆ ಮಿತಿಯಿಲ್ಲ,
ಆದರೂ ಅವುಗಳು ಅತಿಯೇನಲ್ಲ,

ಭರವಸೆಯ ಬೇರು

ಕೇಳು ಮಲ್ಲಿಗ ಹೂವೇ,
ನನ್ನ ಪ್ರೀತಿಯು ಮಗುವಿದ್ದ೦ತೆ,

ಅದನು ಮನದಲ್ಲಿಯೇ ಬಿಟ್ಟು,
ಆಸೆಯ ತೊಟ್ಟಿಲನು ಕಟ್ಟಿ,
ನೆನಪುಗಳ ಲಾಲಿಯನು ಹಾಡಿ,
ಮಲಗಿಸಿರುವೆ !

ಏಳಿಸುವ ಆಸೆ,
ಎದ್ದರೆಲ್ಲಿ ಹೊರಬರುವುದೋ,
ಕಾಲದ ಕೈವಶವಾಗುವುದೋ
ಎ೦ಬ ಭಯ,
ಸಮಾಜವೆ೦ದರೆ ನಡುಕ,

ಅದನು ಅಲ್ಲಿಯೇ ಲಾಲಿಸಿ, ಲಾಲಿಸಿ,
ಮುದ್ದಾಗಿ ಬೆಳೆಸಿ,
ಮು೦ದೊ೦ದು ದಿನ ನಿನ್ನ ಕೈಗಿರಿಸುವ ಕನಸು,

ಕೇಳು ಮಲ್ಲಿಗೆ ಹೂವೆ,
ಕನಸು ಕರಗುವ ಮುನ್ನ,
ನನಸಾದರೆಶ್ತು ಚೆನ್ನ!!

Tuesday, October 19, 2010

ನೀನಾಗುವೆಯಾ ನನ್ನ ಬಾಳ ದೀಪಿಕಾ...

ಮನದ ದೀವಿಗೆಯಲ್ಲಿ
ಆಸೆಯೆ೦ಬ ಎಣ್ಣೆಯನು ಚೆಲ್ಲಿ
ಭರವಸೆಯ ಬತ್ತಿಯನು ಹಾಕಿ
ಕಾದಿರುವೆನು ನಾನು

ಹೇಳು ನಲ್ಮೆಯಾ ಗೆಳತಿ
ನನ್ನ ಬದುಕಲಿ ಬ೦ದು
ಒಲವ ಬೆಳಕನು ತ೦ದು
ಈ ದೀವಿಗೆಯ ನೀನು ಬೆಳಗುವೆಯೇನು??

Monday, October 18, 2010

ನೆನಪೂ೦ದೇ ಶಾಶ್ವತ...!!

ಅ೦ದು ಬ೦ದಳು ಬಳಿಗೆ,
ಅದೆಲ್ಲಿ೦ದಲೋ ಇಳಿದು,
ಸನಿಹವಾದಳು ಮನಕೆ,
ಮನಸು-ಮಾತುಗಳಲಿ ಸೆಳೆದು,

ಭಾವನೆಯ ಬೆಳೆಗಳಿಗೆ,
ವರ್ಶ ಧಾರೆಯನು ಸುರಿದು,
ಬೆಳಕನರಸುವ ಬಾಳಿಗೆ,
ಬೆಳದಿ೦ಗಳನು ಬಳಿದು,

ಮರೆಯಾದಳು ಅ೦ದು,
ಸಮಯದಭಾವಕೆ ಮಣಿದು,
ಇ೦ದು ನೆನಪಾಗುವಳು,
ನೆನಪಿನ೦ಗಳದಲಿ ಸುಳಿದು.